ಉತ್ತರ ಕುಮಾರ
	
ಮಹಾಭಾರತದ ಒಂದು ಪಾತ್ರ. ಈತನ ಪ್ರಸಂಗ ಜನತೆಯ ನೆನಪಿನಲ್ಲಿ ಅಚ್ಚಳಿಯದೆ ನಿಂತಿದೆ. ಈತ ಮತ್ಸ್ಯದೇಶದ ರಾಜನಾದ ವಿರಾಟ, ಸುದೇಷ್ಣೆಯರ ಮಗ, ದ್ರೌಪದೀ ಸ್ವಯಂವರ ಕಾಲದಲ್ಲಿ ಈತ ಪಾಂಚಾಲ ದೇಶಕ್ಕೂ ಹೋಗಿದ್ದ. ಭೂಮಿಂಜಯ, ವಿರಾಟಪುತ್ರ, ಮತ್ಸ್ಯಪುತ್ರ ಎಂಬ ಹೆಸರುಗಳೂ ಇದ್ದುವು.
	
ಕೌರವರು ಉತ್ತರದ ದಿಕ್ಕಿನಲ್ಲಿ ಗೋಹರಣ ಮಾಡಿದ್ದನ್ನು ತಿಳಿದ ಉತ್ತರ ಕುಮಾರ ಅವರ ಮೇಲೆ ಯುದ್ಧಕ್ಕೆ ಹೋಗಲು ತನಗೆ ಸರಿಯಾದ ಸಾರಥಿಯಿಲ್ಲವೆಂದು ಚಡಪಡಿಸುತ್ತಾನೆ. ಬೃಹನ್ನಳೆಯ ವೇಷದಲ್ಲಿದ್ದ ಅರ್ಜುನನನ್ನು ಸಾರಥಿಯನ್ನಾಗಿ ನೇಮಿಸಿಕೊಳ್ಳಬೇಕೆಂದು ಸೈರಂಧ್ರಿ ಸೂಚಿಸುತ್ತಾಳೆ. ಬೃಹನ್ನಳೆಯನ್ನು ಸಾರಥಿಯಾಗೆಂದು ಕೇಳಿದಾಗ ಬೇಕೆಂದೇ ಬೃಹನ್ನಳೆ ಯುದ್ಧಭೂಮಿಯಲ್ಲಿ ಸಾರಥಿಯಾಗಲು ತನ್ನ ಅಸಮರ್ಥತೆಯನ್ನು ಹೇಳಿಕೊಂಡಾಗ ಉತ್ತರ ಕುಮಾರ ತನ್ನಲ್ಲಿ ಇಲ್ಲದ ಪೌರುಷವನ್ನು ಅರಮನೆಯ ಹೆಂಗೆಳೆಯರ ಮುಂದೆ ಕೊಚ್ಚಿಕೊಳ್ಳುವುದು ಮಹಾಭಾರತದಲ್ಲಿ ಒಂದು ಸ್ವಾರಸ್ಯ ಪ್ರಸಂಗ. ಈ ಪ್ರಸಂಗವನ್ನು ಕುಮಾರವ್ಯಾಸ ತನ್ನ ಗದುಗಿನ ಭಾರತದಲ್ಲಿ ರಸಪೂರ್ಣವಾಗಿ ಚಿತ್ರಿಸಿದ್ದಾನೆ. ಅನಂತರ ಬೃಹನ್ನಳೆಯ ಸಾರಥ್ಯವನ್ನು ಪಡೆದ ಉತ್ತರ ಕುಮಾರ ಯುದ್ಧ ಭೂಮಿಯನ್ನು ನೋಡಿದ ಕೂಡಲೇ ಹೆದರಿ ನಿಲ್ಲುತ್ತಾನೆ. ಆತನಿಗೆ ಧೈರ್ಯ ತುಂಬಿ ಅರ್ಜುನ ತಾನೇ ಯುದ್ಧ ಮಾಡುತ್ತಾನೆ. ಆ ಸಮಯದಲ್ಲಿ ಉತ್ತರಕುಮಾರ ಅರ್ಜುನನ ಸಾರಥಿಯಾಗಿ ರಥವನ್ನು ನಡೆಸುತ್ತಾನೆ. ಮುಂದೆ ಮಹಾಭಾರತ ಯುದ್ಧದಲ್ಲಿ ಶಲ್ಯನಿಂದ ಹತನಾಗುತ್ತಾನೆ. ಶೌರ್ಯವಿಲ್ಲದೆ ಬಡಾಯ ಕೊಚ್ಚುವವರನ್ನು ಸಾಮಾನ್ಯವಾಗಿ ಉತ್ತರಕುಮಾರನೆನ್ನುವುದು ರೂಢಿಯಲ್ಲಿದೆ. ಉತ್ತರನ ಪೌರುಷ ಒಲೆಯ ಮುಂದೆ, ನಿನ್ನ ಪೌರುಷ ಎಲೆಯ ಮುಂದೆ ಎನ್ನುವುದು ಗಾದೆ ಮಾತಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ